ಮೈಸೂರು ವಾಸುದೇವಾಚಾರ್ಯ	
 	1885-1961. ಕರ್ನಾಟಕ ಪ್ರಸಿದ್ಧ ವಾಗ್ಗೇಯಕಾರರು. ಕಮಾಚ್ ರಾಗಕ್ಕೆ ಅಪೂರ್ವ ಮೆರುಗನ್ನು ನೀಡಿದ ಬ್ರೋಚೆ ವಾರೆವರುರಾ ಹಾಗೂ ಬಿಲಹರಿ ರಾಗದ ಶ್ರೀಚಾಮುಂಡೇಶ್ವರಿ ಎಂಬಂಥ ಪ್ರಸಿದ್ಧ ಕೃತಿಗಳನ್ನು ಕರ್ನಾಟಕ ಸಂಗೀತ ಭಂಡಾರಕ್ಕೆ ಅರ್ಪಿಸಿದ ವಿದ್ವಾಂಸರು. ಸುಬ್ರಹ್ಮಣ್ಯಾಚಾರ್ಯ, ಕೃಷ್ಣಾಬಾಯಿ ದಂಪತಿಗಳಿಗೆ 28 ಮೇ 1865ರಂದು ಇವರ ಜನನವಾಯಿತು. ಮಾಧ್ವ ವೈದಿಕ ಸಂಪ್ರದಾಯಕ್ಕೆ ಸೇರಿದ ಸುಬ್ರಹ್ಮಣ್ಯಾಚಾರ್ಯರು ಪೌರಾಣಿಕ ಶ್ರೇಷ್ಠರು ಹಾಗೂ ವೇದಾಧ್ಯಯನ ಸಂಪನ್ನರೆಂದು ಹೆಸರು ಗಳಿಸಿದ್ದರು. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ವಿದ್ವತ್ತು, ವಿದ್ಯಾಪಕ್ಷಪಾತ ಮತ್ತು ಕಲಾ ಪ್ರೋತ್ಸಾಹಗಳಿಂದ ಆಕರ್ಷಿತರಾದ ಸುಬ್ರಹ್ಮಣ್ಯಾಚಾರ್ಯರು ತಮ್ಮ ಹುಟ್ಟಿದ ಊರಾದ ಕೊಯಮತ್ತೂರು ಜಿಲ್ಲೆಯ ಜೇವೂರು ಗ್ರಾಮ ಬಿಟ್ಟು ಬೆಂಗಳೂರಿನ ಸಮೀಪವಿರುವ ಕಾನಕಾನ ಹಳ್ಳಿಯಲ್ಲಿ (ಇಂದಿನ ಕನಕಪುರ) ಸ್ವಲ್ಪಕಾಲ ಇದ್ದು ಅನಂತರ ಮೈಸೂರಿಗೆ ಬಂದು ನೆಲೆಸಿದರು.

	ಇವರಿಗೆ ಮೂರು ವರ್ಷ ತುಂಬುವಾಗಲೇ ತಂದೆ ದೈವಾಧೀನರಾದರು. ಮುಂದೆ ಇವರನ್ನು ಪೋಷಿಸುವ ಜವಾಬ್ದಾರಿ ಮೈಸೂರಿನ ಪ್ರಸಿದ್ಧ ಸಂಸ್ಕøತ ವಿದ್ವಾಂಸರಾಗಿದ್ದ ತಾತ (ತಾಯಿಯ ತಂದೆ) ಗೋಪಾಲಾಚಾರ್ಯರ ಮೇಲೆ ಬಿತ್ತು. ಇವರು ಪೆರಿಯಸ್ವಾಮಿ ತಿರುಮಲಾಚಾರ್ಯ ಅವರಲ್ಲಿ ಮೊಮ್ಮಗನನ್ನು ಶಿಷ್ಯವೃತ್ತಿಗೆ ನಿಯೋಜಿಸಿದರು. ಮುಂದೆ ಹನ್ನೆರಡನೆಯ ವಯಸ್ಸಿನಲ್ಲಿ ಪ್ರೌಢ ಸಂಸ್ಕøತ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಸಂಸ್ಕøತ ಪಾಠಶಾಲೆಗೆ ಸೇರಿಸಿದರು. ಇಲ್ಲಿ ವ್ಯಾಕರಣ ಮತ್ತು ಸಂಸ್ಕøತ ಅಧ್ಯಯನ ನಡೆಯುತ್ತಿತ್ತು. ಆದರೆ ವಾಸುದೇವಾಚಾರ್ಯರಿಗೆ ಸಣ್ಣ ವಯಸ್ಸಿನಿಂದಲೂ ಸಂಗೀತಕ್ಕೆ ಒಲವು ಇತ್ತು. ಮನೆಯಲ್ಲೇ ಇದ್ದ ಸಂಗೀತ ವಿದ್ವಾಂಸರಾದ ಸುಬ್ಬರಾಯರಲ್ಲಿ ಸಂಗೀತ ಕಲಿಯಲು ಆಸೆ. ಆ ಕಾಲದಲ್ಲಿ ಸಂಗೀತ, ನಾಟಕ ಇಂಥ ಕಲೆಗಳನ್ನು ಗೌರವಸ್ಥ ಮನೆತನದವರು ಕಲಿಯಲೇಬಾರದೆಂಬ ಮನೋವೃತ್ತಿ ರೂಢವಾಗಿತ್ತು, ಆದರೆ ಸೋದರಮಾವ ಪದ್ಮನಾಭಾಚಾರ್ಯರ ಸಹಕಾರದಿಂದ ತಾತನ ಕಣ್ಣು ತಪ್ಪಿಸಿ ಸುಬ್ಬರಾಯರಿಂದಲೇ ಸಂಗೀತ ಕಲಿಯಲು ಪ್ರಾರಂಭಿಸಿದರು. ಎಷ್ಟು ದಿನ ತಾನೇ ಇದನ್ನು ಗುಟ್ಟಾಗಿಡಲು ಸಾಧ್ಯ? ತಾತನಿಗೆ ಇದು ಗೊತ್ತಾಗಿ ವಂಶಕ್ಕೆ ಎಲ್ಲಿ ಕಳಂಕ ತಂದುಬಿಡುತ್ತಾನೋ ಎಂಬ ಭಯದಿಂದ ಇನ್ನು ಮುಂದೆ ಅವರ ಮನೆಗೆ ಹೋಗದಂತೆ ಕಟ್ಟಾಜ್ಞೆ ಮಾಡಿದರು. ಇವರ ಸಂಗೀತದ ಅಭಿರುಚಿಗೆ ಸಿಡಿಲು ಬಡಿದಂತಾಯಿತು.

	ಸಂಸ್ಕøತ ಪಾಠಶಾಲೆಯ ಕ್ರಮದಂತೆ ವಿದ್ಯಾರ್ಥಿಗಳು ತಮ್ಮ ತಮ್ಮ ಪಠ್ಯ ವಿಷಯಗಳನ್ನು ಸ್ವಂತವಾಗಿ ಆಯ್ಕೆಮಾಡುವಂತಿರಲಿಲ್ಲ. ಎಲ್ಲ ಪಠ್ಯವಿಷಯಗಳನ್ನು ಬೇರೆಬೇರೆ ಚೀಟಿಗಳಲ್ಲಿ ಬರೆದು ಪಾಠಶಾಲೆಯ ಮಹಾಗಣಪತಿಯ ಮುಂದೆ ಇಟ್ಟು ಒಂದು ಸಣ್ಣ ಮಗುವಿನ ಕೈಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಲ್ಲೂ ತೆಗೆಸುವುದು ರೂಢಿಯಲ್ಲಿತ್ತು. ವಿದ್ಯಾರ್ಥಿಯ ಹೆಸರಿನಲ್ಲಿ ತೆಗೆದ ಎರಡು ಶಾಸ್ತ್ರಗಳನ್ನು ಆತ ಅಭ್ಯಾಸ ಮಾಡಬೇಕಾಗಿತ್ತು. ಅದರಂತೆ ಚೀಟಿ ತೆಗೆದಾಗ ಇವರ ಹೆಸರಿಗೆ ಬಂದದ್ದು ಸಂಗೀತ ಮತ್ತು ಸಾಹಿತ್ಯ. ಹೀಗಾಗಿ ಸಹಜವಾಗಿಯೇ ಆಸಕ್ತಿ ಇದ್ದ ಸಂಗೀತದ ಪುರೋಭಿವೃದ್ಧಿಗೆ ಅನುಕೂಲವಾಯಿತು. ಪಾಠಶಾಲೆಯಲ್ಲೇ ಸಂಗೀತ ಅಧ್ಯಾಪಕರಾಗಿದ್ದ ವೀಣಾ ಪದ್ಮನಾಭಯ್ಯನವರಿಂದ ಸಂಗೀತ ಶಿಕ್ಷಣ ಮುಂದುವರಿಯಿತು. 

	ಅಂದು ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಮಹಾವೈದ್ಯನಾಥ ಅಯ್ಯರ್ ಮತ್ತು ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತವನ್ನು ಇವರು ಒಮ್ಮೆ ಕೇಳಿ ದಿಗ್ಟ್ರಾಂತರಾದರು. ಸಂಗೀತ ಹೀಗೆ ಇರುವುದು ಸಾಧ್ಯವೇ ಎಂಬ ಬೆರಗು. ಅದರಲ್ಲೂ ಪಟ್ಣಮ್ ಅವರ ಬಿಕ್ಕಟ್ಟಿನ ಮಧ್ಯನಡೆಯಗಾಯನ ಇವರ ಮನಸ್ಸು ಸೂರೆಗೊಂಡಿತ್ತು. ಹೇಗಾದರೂ ಮಾಡಿ ಅವರ ಜೊತೆ ಸಂಗೀತ ಶಿಕ್ಷಣ ಮುಂದುವರಿಸಬೇಕೆಂದು ನಿರ್ಧರಿಸಿದರು. ಇವರ ಹಂಬಲ ಅಂದಿನ ಮಹಾರಾಜರಾಗಿದ್ದ ಚಾಮರಾಜ ಒಡೆಯರಿಗೆ ಹೇಗೋ ತಿಳಿಯಿತು. ಅವರು ಒಡನೆ ಇವರನ್ನು ತಮಿಳುನಾಡಿನ ತಿರುವಯ್ಯಾರಿನಲ್ಲಿದ್ದ ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್‍ರವರ ಬಳಿ ಉನ್ನತ ಸಂಗೀತ ಶಿಕ್ಷಣ ಪಡೆಯಲು ಕಳುಹಿಸಿಕೊಟ್ಟರು. ಆಗ ಇವರ ವಯಸ್ಸು 19 ವರ್ಷ, ಗುರುಗಳಾದ ಪಟ್ಟಮ್ ಸದ್ಗುರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರು. ಅವರು ತಮ್ಮ ಶಿಷ್ಯನಿಗೆ ಅಟತಾಳದ ಬೇಗಡೆ ರಾಗದ ಮರಚಿಟ್ಲುಂಡೇರಿ ಎಂಬ ಸ್ವಂತ ವರ್ಣದಿಂದ ಶಿಕ್ಷಣ ಪ್ರಾರಂಭಿಸಿದರು. ಪ್ರಾರಂಭ ಮಾಡಿದ ಗತಿಯಿಂದ ಮೇಲೆ ಮೂರುಕಾಲ, ಕೆಳಗೆ ಮೂರುಕಾಲ ವರ್ಣದ ಸಾಧನೆ, ಒಂದೊಂದು ವರ್ಣವೇ ಸುಮಾರು ಮೂರು ತಿಂಗಳು ತೆಗೆದುಕೊಳ್ಳುತ್ತಿತ್ತು. ಪ್ರತಿಯೊಂದು ಆವರ್ತದಲ್ಲಿಯೂ ರಾಗಾಲಾಪನೆ ಹಾಗೂ ನೆರವಲ್ (ಸಾಹಿತ್ಯ ವಿನ್ಯಾಸ) ಶಿಕ್ಷಣವಿರುತ್ತಿತ್ತು.

	ಹೀಗಾಗಿ ವಾಸುದೇವಾಚಾರ್ಯರ ಸಂಪ್ರದಾಯಶುದ್ಧ ಸಂಗೀತ ಶಿಕ್ಷಣ ಪಡೆದದ್ದೇ ಅಲ್ಲದೆ ಕೃತಿ ರಚನೆ ಮಾಡುವುದನ್ನೂ ಕಲಿತರು. ಇವರು ಮೈಸೂರಿಗೆ ಹಿಂತಿರುಗಿದ ಬಳಿಕ ಆಸ್ಥಾನ ವಿದ್ವಾಂಸರಾಗಿ ನೇಮಿಸಲ್ಪಟ್ಟರು. ತೆಲುಗು ಮತ್ತು ಸಂಸ್ಕøತ ಭಾಷೆಗಳಲ್ಲಿ ಪಾಂಡಿತ್ಯಗಳಿಸಿದ್ದ ಇವರು ಸಂಗೀತ ಮತ್ತು ಶಾಸ್ತ್ರಗಳಲ್ಲೂ ಘನ ವಿದ್ವಾಂಸರಾಗಿದ್ದರು. ಜೊತೆಗೆ ಕೃತಿ ರಚನಾಕೌಶಲ ಹಾಗೂ ಸರಿಯಾಗಿ ವಿಮರ್ಶೆ ಮಾಡುವ e್ಞÁನವನ್ನೂ ಬೆಳೆಸಿಕೊಂಡಿದ್ದರು.

	ಗಡುಸಾದ ತಮ್ಮ ಶಾರೀರವನ್ನು ಕ್ರಮಬದ್ಧ ಸಾಧನೆಯಿಂದ ಹತೋಟಿಗೆ ತಂದಿದ್ದರು. ಮೂರು ಸ್ಥಾಯಿಗಳಲ್ಲಿಯೂ ಇವರ ಶಾರೀರ ಸಂಚರಿಸುತ್ತಿತ್ತು. ಶಾರೀರ ಶಂಖವಾದ್ಯದಂತೆಯೂ ಕೆಲವು ಸಲ ವೀಣೆಯಂತೆಯೂ ನುಡಿಯುತ್ತಿತ್ತು. ವ್ಯಾಪ್ತಿ ಅನುಮಂದ್ರದಿಂದ ತಾರಷಡ್ಜದವರೆಗೆ, ಘನರಾಗ ಹಾಗೂ ತಾನಗಳನ್ನು ಹಾಡಲು ಅನುಕೂಲವಾದ ಶಾರೀರ ಮಂದ್ರಸ್ಥಾಯಿಯಲ್ಲಿ ತಾನ ಹಾಡುವಲ್ಲಿ ಸ್ವಂತ ಶೈಲಿಯನ್ನು ರೂಪಿಸಿಕೊಂಡಿದ್ದರು. ಕೃತಿಗಳನ್ನು ಅರ್ಥಮಾಡಿಕೊಂಡು ರಂಜನೀಯವಾಗಿ ನಿರೂಪಿಸುತ್ತಿದ್ದರು. ಉಸಿರಿನ ಕೊರತೆಯಿಂದಾಗಲಿ ತಾಳದ ಅನುಕೂಲತೆಗಾಗಲಿ ಯಾವುದೇ ಸಮಯದಲ್ಲೂ ಸಾಹಿತ್ಯವನ್ನು ಬೇಕಾದಂತೆ ಒಡೆಯುತ್ತಿರಲಿಲ್ಲ. ಸಾಹಿತ್ಯ ಹಾಗೂ ರಾಗಭಾವ ಅರಿತು ನೆರೆವಲ್ ಮಾಡುತ್ತಿದ್ದರು. ಸಂಸ್ಕøತ ಶ್ಲೋಕಗಳನ್ನು ರಸವತ್ತಾಗಿ ರಾಗಮಾಲಿಕೆಯಲ್ಲಿ ಹಾಡುತ್ತಿದ್ದರು. ಹಿಂದೂಸ್ಥಾನಿ ರಾಗಗಳನ್ನೂ ನಿರಾಯಾಸವಾಗಿ ಹಾಡುತ್ತಿದ್ದರು. ಸಾಕಷ್ಟು ಹೊತ್ತು ಕುಳಿತು ತಾಳ್ಮೆಯಿಂದ ತಂಬೂರಿ ಶ್ರುತಿ ಮಾಡುತ್ತಿದ್ದರು. ಹಾಡಲು ಪ್ರಾರಂಭಿಸಿದರೆ ಶ್ರುತಿ ಶಾರೀರದೊಂದಿಗೆ ಲೀನವಾಗುತ್ತಿತ್ತು.

	ಈ ಶತಮಾನದ ಪ್ರಸಿದ್ಧ ವಾಗ್ಗೇಯಕಾರರಾಗಿರುವ ಇವರು ಮಾಡಿರುವ ರಚನೆಗಳು ಸುಮಾರು ಇನ್ನೂರು. ಇವು ಸಂಸ್ಕøತ ಮತ್ತು ತೆಲುಗು ಭಾಷೆಗಳಲ್ಲಿವೆ. ಮೊತ್ತಮೊದಲ ಕೃತಿ ಮಾಯಾಮಾಳವಗೌಳರಾಗದ ಚಿಂತಯಾಮ್ಯಹಂ ಜಾನಕೀ ಕಾಂತಂ (1900). ಸುಮಾರು ನೂರನಲ್ವತ್ತು ಕೃತಿಗಳನ್ನು ಎರಡು ಭಾಗಗಳಲ್ಲಿ "ವಾಸುದೇವ ಕೀರ್ತನ ಮಂಜರಿ" ಎಂಬ ಗ್ರಂಥದಲ್ಲಿ ಸ್ವರಸಹಿತವಾಗಿ ಪ್ರಕಟಿಸಿದ್ದಾರೆ. ಮೊದಲಭಾಗ ಕೇಶವಾದಿ ದ್ವಾದಶನಾಮ ಕೃತಿಗಳನ್ನೂ ಎರಡನೆಯ ಭಾಗ ಸಂಕರ್ಷಣಾದಿ ದ್ವಾದಶನಾಮ ಕೃತಿಗಳನ್ನೂ ಒಳಗೊಂಡಿದೆ. ಇವರ ಕೃತಿ ರಚನೆಯಲ್ಲಿ ಸುಮರು 100 ರಾಗಗಳು ಬಳಕೆಯಾಗಿವೆ. ಇವುಗಳಲ್ಲಿ ಪ್ರಚಲಿತ ಹಾಗೂ ಅಪ್ರಚಲಿತ ರಾಗಗಳು ಸೇರಿವೆ.

	ಇಂದು ಪ್ರಚಾರದಲ್ಲಿರುವ ಕಮಾಚ್ ರಾಗಕ್ಕೆ ಇವರನ್ನು ನಿಮಾತೃ ಎಂದು ನಿಸ್ಸಂದೇಹವಾಗಿ ಕರೆಯಬಹುದು. ಸುನಾದವಿನೋದಿನಿಯಂಥ ವಿರಳ ರಾಗ ದೇವಾದಿದೇವ ಎಂಬ ಇವರ ಕೃತಿಯ ಮೂಲಕ ಅಧಿಕ ಜನಪ್ರಿಯತೆ ಗಳಿಸಿತು. ಇವರ ಕೆಲವು ಜನಪ್ರಿಯ ಕೃತಿಗಳಿವು : ಮೋಹನರಾಗದ ರಾರಾ ರಾಜೀವಲೋಚನ, ಗೌಳ ರಾಗದ ಪ್ರಣಮಾಮ್ಯಹಮ್ ಗೌರೀಸುಂತಮ್, ಹಿಂದೋಳ ರಾಗದ ಮಾಮವತು ಶ್ರೀ ಸರಸ್ವತಿ, ದೇವಮನೋಹರಿ ರಾಗದ ಪಲುಕವದೇಮಿರಾ, ಅಭೇರಿ ರಾಗದ ಭಜರೇ ಮಾನಸ.

ವಾಸುದೇವಾಚಾರ್ಯರ ರಚನೆಗಳಲ್ಲಿ ಸ್ವರಜತಿ, ತಾನವರ್ಣ, ಕೃತಿ, ತಿಲ್ಲಾನ, ರಾಗಮಾಲಿಕೆ ಇವೆಲ್ಲ ಸೇರಿವೆ. ಕೆಲವು ಕೃತಿಗಳಿಗೆ ಮಧ್ಯಮಕಾಲ ಸಾಹಿತ್ಯವನ್ನೂ ಇನ್ನು ಕೆಲವಕ್ಕೆ ಚಿಟ್ಟೆಸ್ವರಗಳನ್ನೂ ಸೇರಿಸಿದ್ದಾರೆ. ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳನ್ನು ಕುರಿತು ರಾಗ ಮಾಲಿಕೆಗಳನ್ನು ರಚಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ಆದೇಶದಂತೆ ಸರಸ್ವತಿ ಮನೋಹರಿ ರಾಗದಲ್ಲಿ ಕರುಣಸುತಾಯೇ ಎಂಬ ಕನ್ನಡ ಭಾಷೆಯ ಕೃತಿ ರಚಿಸಿದ್ದಾರೆ. ಕನ್ನಡಿಗರಾದರೂ ಕನ್ನಡ ಭಾಷೆಯಲ್ಲಿ ಕೃತಿರಚನೆ ಮಾಡಲಿಲ್ಲವೆಂಬ ಅಪಾದನೆ ಆಚಾರ್ಯರ ಮೇಲಿದೆ. ಮಹಾರಾಜರು ತಮ್ಮ ಕುಲದೇವತೆ ಶ್ರೀ ಚಾಮುಂಡೇಶ್ವರಿಯನ್ನು ಕುರಿತು 108 ಕೃತಿಗಳನ್ನು ಆಚಾರ್ಯರು ಕನ್ನಡದಲ್ಲಿ ರಚಿಸಬೇಕೆಂದು ಅಪೇಕ್ಷಿಸಿದ್ದರು. ಆದರೆ ಆಚಾರ್ಯರು ಇದನ್ನು ಈಡೇರಿಸಲಿಲ್ಲ.
ಆಚಾರ್ಯರು ತ್ಯಾಗರಾಜರ ಶಿಷ್ಯಪರಂಪರೆಗೇ ಸೇರಿರುವುದರಿಂದ ಆ ಪರಂಪರೆಯ ಸಂಪ್ರದಾಯ ಶುದ್ಧತೆ ಮತ್ತು ಭಾವ ಇವರ ರಚನೆಗಳಲ್ಲೂ ಕಂಡುಬರುವುದು ಸಹಜ. ಇವರ ಕೃತಿಗಳು ಪ್ರಚಾರಕ್ಕೆ ಬಂದ ಹೊಸದರಲ್ಲಿ ಇವನ್ನು ತ್ಯಾಗರಾಜರ ಕೃತಿಗಳೇ ಎಂದು ರಸಿಕರು ಭ್ರಮಿಸುತ್ತಿದ್ದರಂತೆ. ಇವುಗಳಲ್ಲಿ ಮುಖ್ಯವಾಗಿ ಕಂಡುಬರುವುದು ಒಂದು ರೀತಿಯ ಮಧುರತೆ ಹಾಗೂ ಸಾಹಿತ್ಯದ ಸರಳತೆ. ಈ ಕಾರಣದಿಂದ ಇವರನ್ನು ಅಭಿನವ ತ್ಯಾಗರಾಜ ಎಂದೂ ಕರೆಯುವುದುಂಟು. ಒಂದು ಬಾರಿ ಆಚಾರ್ಯರು ವೀಣೆಶೇಷಣ್ಣನವರ ಮನೆಯಲ್ಲಿ ಖರಹರಪ್ರಿಯ ರಾಗದಲ್ಲಿ ಗಾನ ಸುಧಾರಸ ಎಂಬ ತಮ್ಮ ಕೃತಿಯನ್ನು ಹಾಡಿದರು. ಚರಣದಲ್ಲಿ ತ್ಯಾರಗಾಜುನಿ ಮಹಾತ್ಮುಲನು ದಲಚುಕೋನಿ ಎಂಬ ಸಾಹಿತ್ಯ ಕೇಳಿ ಎಲ್ಲರಿಗೂ ಸಂದೇಹ ಉಂಟಾಯಿತು. ತಡೆಯಲಾರದೆ ಆಚಾರ್ಯರನ್ನು ಕೇಳಿ ನಿಜಸಂಗತಿ ತಿಳಿದ ಮೇಲೆ ಶೇಷಣ್ಣ ಮತ್ತು ಬಿಡಾರಂ ಕೃಷ್ಣಪ್ಪ ಇವರನ್ನು ಪ್ರಶಂಸಿಸಿದರು. 
ಖರಹರಪ್ರಿಯ ರಾಗದಲ್ಲಿ ಇವರ ಇನ್ನೊಂದು ಶ್ರೇಷ್ಠ ರಚನೆ ರಾರಾಯನಿ ಪಿಲಚಿತೇ. ಜುಂಜೂಟಿ ರಾಗ ಸುಂದರವಾಗಿ ಚಿತ್ರಿತವಾಗಿರುವ ಪ್ರಣತಾರ್ತಿ ಹರಂ ಭಜೇ. ನಾಟುಕುರಂಜಿಯ ನಾಚೈ ವಿಡಮಕುರಾ. ಸ್ವರಾಕ್ಷರಗಳಿಂದ ಪ್ರಾರಂಭವಾಗುವ ರೀತಿಗೌಳದ ಮಮಹೃದಯೇ, ರಿಷಭಪ್ರಿಯ ರಾಗದ ಮಹಾತ್ಮುಲೇ ಇವು ಇವರ ಇನ್ನು ಕೆಲವು ಜನಪ್ರಿಯ ರಚನೆಗಳು, ತ್ಯಾಗರಾಜರನ್ನು ಕುರಿತು ಶ್ರೀಮದಾದಿ ತ್ಯಾಗರಾಜ ಗುರುವರಮ್ (ರಾಗ ಕಲ್ಯಾಣಿ), ಪುರಂದರದಾಸರನ್ನು ಕುರಿತು ಶ್ರೀಪುರಂದರಗುರುವರಮ್ (ರಾಗ ಸರಸ್ವತಿ ಮನೋಹರಿ), ಗಣೇಶ, ಸರಸ್ವತಿ, ಲಕ್ಷ್ಮಿ, ವಿಷ್ಣು, ಈಶ್ವರ, ಚಾಮುಂಡೇಶ್ವರಿ, ಮಾರುತಿ ಹೀಗೆ ಎಲ್ಲರನ್ನೂ ಕುರಿತು ಕೃತಿ ರಚನೆ ಮಾಡಿದ್ದಾರೆ.

ವಾಸುದೇವಾಚಾರ್ಯರ ಮೊದಲ ಕಛೇರಿ ವೀಣೆ ಶೇಷಣ್ಣನವರ ಆಶೀರ್ವಾದದೊಡನೆ 1896ರಲ್ಲಿ ನಡೆಯಿತು. ಮುಂದೆ ಇವರು ದೇಶಾದ್ಯಂತ ಕಛೇರಿಗಳನ್ನು ನಡೆಸಿ ಮೈಸೂರಿನ ಗೌರವ, ಘನತೆ ಹಾಗೂ ಕೀರ್ತಿ ಪತಾಕೆಯನ್ನು ಎತ್ತಿಹಿಡಿದರು. 1912ರಲ್ಲಿ ಜಲಂಧರ್‍ನಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಪಡೆದರು. ಇವರಿಗೆ ಸಂದ ಬಿರುದು ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸಂಗೀತಶಾಸ್ತ್ರರತ್ನ, 1935ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಕಲಾನಿಧಿ. 1944ರಲ್ಲಿ ಜಯಚಾಮರಾಜ ಒಡೆಯರಿಂದ ಸಂಗೀತಶಾಸ್ತ್ರ ವಿಶಾರದ, ರವೀಂದ್ರನಾಥ ಟಾಗೋರರಿಂದ ಸಂಗೀತ ಭಾವ ಶಿಖಾಮಣಿ ಇತ್ಯಾದಿ ಬಿರುದುಗಳನ್ನು ಪಡೆದರು. 1954ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಕರ್ನಾಟಕ ಸಂಗೀತಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. 1959ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಆಚಾರ್ಯರು ತುಂಬ ಸರಳರು, ಸೌಜನ್ಯಶೀಲರು, ಅಲ್ಲದೆ ನಮ್ರತೆ ವಿನಯಗಳಿಗೆ ಹೆಸರುವಾಸಿ, ಶಿಷ್ಯರನ್ನು ಒಳ್ಳೆಯ ಸ್ನೇಹಿತರಂತೆ ನೋಡಿಕೊಳ್ಳುತ್ತಿದ್ದರು. 

ಕರ್ನಾಟಕ ಸಂಗೀತಕ್ಕೆ ಇವರು ನೀಡಿರುವ ಗ್ರಂಥಗಳು ಒಟ್ಟು ಹತ್ತು: ಶ್ರೀ ವಾಸುದೇವ ಕೀರ್ತನ ಮಂಜರಿ ಭಾಗ 1 (1920); 16 ಕೃತಿಗಳು ಮತ್ತು ಒಂದು ಶ್ರೀ ವಾಸುದೇವ ಕೀತನ ಮಂಜರಿ ಭಾಗ 2 (1956); ಮೈಸೂರು ಸದಾಶಿವರಾಯರ ಕೃತಿಗಳು (ಮದರಾಸು ಮ್ಯೂಸಿಕ್ ಅಕಾಡೆಮಿ ಪ್ರಕಟಣೆ, 1937 ಸ್ವರಸ್ವತಿಯನ್ನು ಒಳಗೊಂಡಿದೆ); ನಾ ಕಂಡ ಕಲಾವಿದರು (1955); ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್ (1955); ನವರತ್ನ ರಾಗಮಾಲಿಕಾ (ಮದರಾಸಿನ ಕಲಾಕ್ಷೇತ್ರದ ಪ್ರಕಟಣೆ, 1956); ವಾಲ್ಮೀಕಿ ರಾಮಾಯಣ (ಮದರಾಸಿನ ಶ್ರೀ ಕಲಾಕ್ಷೇತ್ರದ ಪ್ರಕಟಣೆ, (1956); ಕರ್ನಾಟಕ ಸಂಗೀತದ ಲಕ್ಷಣಭಾಗ; ಶ್ರೀವಾಸುದೇವ ಕೀರ್ತನ ಮಂಜರಿ ಸ್ವದೇಶಮಿತ್ರನ್ ಪ್ರಕಟಣೆ-ತಮಿಳಿನಲ್ಲಿ); ನೆನಪುಗಳು (1962). 

ಆಚಾರ್ಯರು ತಮ್ಮ ಜೀವನದ ಕೊನೆಯ ಎಂಟು ವರ್ಷಗಳಲ್ಲಿ ಮದರಾಸಿನ ಅಡ್ಯಾರಿನಲ್ಲಿರುವ ಕಲಾಕ್ಷೇತ್ರದಲ್ಲಿ ರುಕ್ಮಿಣಿದೇವಿಯವರ ಆಮಂತ್ರಣ ಅಂಗೀಕರಿಸಿ ಆ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. ಆಗ ಶ್ರೀಮದ್ವಾಲ್ಮೀಕಿ ರಾಮಾಯಣ ಉಪಯೋಗಿಸಿಕೊಂಡು ಸೀತಾಸ್ವಯಂವರ, ಶ್ರೀ ರಾಮವನಾಗಮನ, ಪಾದುಕಾಪಟ್ಟಾಭಿಷೇಕ ಮುಂತಾದ ನೃತ್ಯನಾಟಕಗಳ ಒಂದೊಂದು ಸನ್ನಿವೇಶದ ಸಂದರ್ಭ ಅರಿತು ಸಮಯೋಚಿತವಾಗಿ ರಾಗಸಂಯೋಜನೆ ಮಾಡಿದರು. ರುಕ್ಮಿಣಿದೇವಿಯವರ ನೇತೃತ್ವದಲ್ಲಿ ನೃತ್ಯನಾಟಕಗಳು ರಂಗದಮೇಲೆ ಪ್ರದರ್ಶಿಸಲ್ಟಟ್ಟಾಗ ಸಂಗೀತವನ್ನು ಕೇಳಿದ ಪ್ರತಿಯೊಬ್ಬರೂ ಬೆರಗಾದುದನ್ನು ಮರೆಯುವಂತಿಲ್ಲ. ಇವರ ಜೀವನದಲ್ಲಿ ಇದೊಂದು ಮಹತ್ಸಾಧನೆ ಎಂದೇ ಹೇಳಬಹುದು.

ಗಾಯನದ ಬಗೆಗೆ ಆಚಾರ್ಯರ ಕೆಲವು ಸಲಹೆಗಳು:
1. ಮಂದ್ರ ಸ್ಥಾಯಿ ಸಾಧನೆಯನ್ನು ಹೆಚ್ಚಾಗಿ ರೂಡಿಸಿಕೊಳ್ಳುವುದರಿಂದ ಆದಷ್ಟು ತಾರಸ್ಥಾಯಿಯನ್ನು ತಲುಪಬಹುದು.
2. ರಾಗವಿನ್ಯಾಸ ಮಾಡುವಾಗ ಪ್ರತಿಯೊಂದು ಸ್ವರಸ್ಥಾನದಲ್ಲೂ ಸ್ವಲ್ಪ ಹೊತ್ತು ನಿಂತು ಅಭ್ಯಾಸ ಮಾಡಬೇಕು. ಅಂದರೆ ಏಕಸ್ವರ ವೃದ್ಧಿಕ್ರಮವನ್ನು ಅನುಸರಿಸಬೇಕು. ಇದರಿಂದ ರಾಗಭಾವಕ್ಕೆ ಹೆಚ್ಚು ಪ್ರಾಶಸ್ತ್ಯ ಬರುತ್ತದೆ.
3. ಒಬ್ಬ ಗಾಯಕ ಇನ್ನೊಬ್ಬ ಗಾಯಕನನ್ನು ಅನುಕರಿಸಿ ಹಾಡುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಅವರವರ ಶಾರೀರಧರ್ಮಕ್ಕೆ ಅನುಕೂಲವಾಗುವಂತೆ ಸಂಗತಿ, ನುಡಿಕಾರಗಳು, ಬರುತ್ತವೆ. ಯಾವುದೇ ತರಹ ಸಾಧನೆ ಮಾಡಿದರೂ ಸಾಧ್ಯವಾಗದ್ದು ಬರುವುದಿಲ್ಲ. ಆದ್ದರಿಂದ ಇವನ್ನು ಅರ್ಥಮಾಡಿಕೊಳ್ಳದೆ, ಆಗದೇ ಇರುವುದನ್ನು ಆಗುವಂತೆ ಮಾಡುವುದು ಶುದ್ಧಮೌಢ್ಯ. ಪ್ರತಿಯೊಬ್ಬನಲ್ಲೂ ಒಂದು ರೀತಿಯ ವೈಶಿಷ್ಟ್ಯವಿರುತ್ತದೆ. ಆ ಪ್ರತಿಭೆಯನ್ನು ತೋರಿಸಲು ಪ್ರಯತ್ನಿಸಿಬೇಕೇ ಹೊರತು ಇನ್ನೊಬ್ಬರನ್ನು ಅನುಕರಣೆ ಮಾಡಲು ಹೋಗಿ ತನ್ನತನವನ್ನು ಕಳೆದುಕೊಳ್ಳೂವುದು ಬಹಳ ತಪ್ಪು. ಪ್ರತಿಯೊಬ್ಬ ಕಲಾವಿದನೂ ಮನೋಧರ್ಮ ಸಂಗೀತವನ್ನು ವೃದ್ಧಿಸಿಕೊಳ್ಳಬೇಕು. ಇದನ್ನು ತೋರಿಸಲು ಶಾರೀರವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಕ್ರಮಬದ್ಧ ಸಾಧನೆಯಿಂದ ಇದು ಸಾಧ್ಯವಾಗುತ್ತದೆ.

ದೇವರೇ, ನನಗೆ ಅನಾಯಾಸ ಮರಣಕೊಡು, ಎಂಬ ಇವರ ಇಚ್ಛೆಗೆ ತಕ್ಕಂತೆ ಆಚಾರ್ಯರು 1961 ಮೇ 17 ರಂದು ನಿಧನರಾದರು.

(ಆರ್.ಎನ್.ಟಿ.ಎ.)
ಪರಿಷ್ಕರಣೆ:
ತ್ಯಾಗರಾಜನ್ ಆರ್. ಎನ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ